ಸಾರಾಭಾಯಿ, ವಿಕ್ರಮ್
	1919-71. ಭಾರತದ ವ್ಯೋಮ ಸಂಶೋಧನೆ, ಉದ್ಯಮ ಮತ್ತು ಸಾಮಾಜಿಕ ಕಾರ್ಯಗಳಿಗೆ ಚಾಲನೆ ನೀಡಿದ ಭೌತವಿಜ್ಞಾನಿ. ಖ್ಯಾತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರು ಮುಂಬಯಿ ಮತ್ತು ಕೇಂಬ್ರಿಜ್‍ಗಳಲ್ಲಿ ಶಿಕ್ಷಣ ಪಡೆದರು. ತದನಂತರ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ವಿಶ್ವಕಿರಣ, ಭೂಕಾಂತತೆ, ಅಂತರಗ್ರಹ ವ್ಯೋಮ, ಸೂರ್ಯ-ಭೂಮಿ ಸಂಬಂಧ ಮುಂತಾದವುಗಳ ಕುರಿತು ಸಂಶೋಧನೆ ಮಾಡಿದರು. ಇದಕ್ಕೆ ಮಾರ್ಗದರ್ಶನ ಮಾಡಿದವರು ಸಿ. ವಿ. ರಾಮನ್ (1888-1979). ಉಷ್ಣವಲಯದಲ್ಲಿ ವಿಶ್ವಕಿರಣಗಳು ಎಂಬ ವಿಷಯ ಕುರಿತಾದ ಇವರ ಸಂಶೋಧನೆಗೆ ಕೇಂಬ್ರಿಜ್ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿತು (1947). 

	ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೊರೆಟರಿಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಇವರು ಮುಂದೆ ಅದರ ನಿರ್ದೇಶಕರೂ ಆದರು (1965). ಹೈಡ್ರೊಜನಿನ ದೈನಿಕ ವ್ಯತ್ಯಯ ಅಯಾನುಗೋಳದಲ್ಲಿ ಆಗುವ ಬದಲಾವಣೆಗಿಂತಲೂ ಹೆಚ್ಚಾಗಿ ಕಾಂತಗೋಳದಲ್ಲಿ ಆಗುವ ಬದಲಾವಣೆಗಳನ್ನು ಅವಲಂಬಿಸಿದೆ ಎಂದು ಸೂಚಿಸಿದ ಖ್ಯಾತಿ ಇವರದ್ದು. ಮೀಸಾನ್ ದೂರದರ್ಶಕ ರಚನೆ; ಕೊಡೈಕೆನಾಲ್, ತಿರುವನಂತಪುರ ಮತ್ತು ಗುಲ್ಮಾರ್ಗ್‍ಗಳಲ್ಲಿ ಸಂಶೋಧನಾ ಠಾಣ್ಯ ಸ್ಥಾಪನೆ - ಇವು ಇವರ ವಿಶಿಷ್ಟ ಕೊಡುಗೆಗಳು. ಅಹಮದಾಬಾದಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ವಸ್ತ್ರೋದ್ಯಮ ಸಂಶೋಧನಸಂಸ್ಥೆ, ನೆಹರೂ ಫೌಂಡೇಶನ್ ಮತ್ತು ಕಮ್ಯೂನಿಟಿ ಸೈನ್ಸ್ ಸೆಂಟರ್‍ನಂಥ ಹಲವು ಸಂಸ್ಥೆಗಳ ಸ್ಥಾಪನೆಗೆ ಕಾರಣೀಭೂತರೂ ಆದರು.

	ಯುರೇನಿಯಮ್ ಅದುರಿನ ಅನ್ವೇಷಣೆಗೆ ಆದ್ಯತೆ ನೀಡಿಕೆ, ಕಲ್ಪಾಕಮ್‍ನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಮಾಣದ ವೇಗವರ್ಧನೆ ಮತ್ತು ಭಾರತೀಯ ಸಂಪನ್ಮೂಲಗಳಿಂದಲೇ ಕೊಲ್ಕತಾದ ಸೈಕ್ಲೊಟ್ರಾನ್ ಸ್ಥಾಪನೆಗೆ ಚಾಲನೆ - ಇವು ವಿಕ್ರಮ್‍ರವರು ಭಾರತದ ಪರಮಾಣು ಶಕ್ತಿ ಮಂಡಲಿಯ ಅಧ್ಯಕ್ಷರಾದ(1966) ಅನಂತರ ಮಾಡಿದ ಸಾಧನೆಗಳು. ಭಾರತದ ಎಲೆಕ್ಟ್ರಾನಿಕ್ ಆಯೋಗದ ಹಾಗೂ ಸಂಯುಕ್ತ ರಾಷ್ಟ್ರ ಸಂಸ್ಥೆ ಸಂಘಟಿತ ಬಾಹ್ಯ ವ್ಯೋಮದ ಶಾಂತಿಯುತ ಉಪಯೋಗಗಳು ಅಧಿವೇಶನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. 

	ಊಧ್ರ್ವ ನಿಯಂತ್ರಣವನ್ನೊಳಗೊಂಡ ಅನುಕ್ರಮಶ್ರೇಣಿಯ ಸಾಂಸ್ಥಿಕ ಸಂರಚನೆಗಳು ಭಾರತಕ್ಕೆ ತಕ್ಕದ್ದಲ್ಲ ಎಂದು ದೃಢವಾಗಿ ನಂಬಿದ್ದ ಇವರು ಕ್ಷಿತಿಜೀಯ ನಿಯಂತ್ರಣ ಮತ್ತು ನಿರ್ವಹಣ ವ್ಯವಸ್ಥೆಗಳನ್ನು ಬೆಂಬಲಿಸಿದರು. ವ್ಯೋಮ ಸಂಶೋಧನೆಯಲ್ಲಿ ಭಾರತ ಸಾಧಿಸಿದ ಯಶಸ್ಸಿಗೆ ಅವರು ಸ್ಥಾಪಿಸಿದ ಇಂಥ ನಿರ್ವಹಣ ವ್ಯವಸ್ಥೆ ಕಾರಣವಾಯಿತು. ಭಾರತದ ಆವಶ್ಯಕತೆಗಳಿಗೆ ಪ್ರಸ್ತುತವಾದ ತಂತ್ರವಿದ್ಯಾಯೋಜನೆಯೊಂದನ್ನು ಇವರು ಹಾಕಿದ್ದರು. ಗದ್ದಲದಲ್ಲೂ ಸಂಗೀತವನ್ನು ಕೇಳಬಲ್ಲೆವಾದರೆ ನಾವು ಮಾಡುವ ಕೆಲಸ ಫಲಪ್ರದವಾಗುವುದು ನಿಶ್ಚಿತ ಎಂಬ ಇವರ ಹೇಳಿಕೆ ಇವರ ವೈಯಕ್ತಿಕ ಜೀವನದರ್ಶನದ ತಿರುಳು. 

	ಸಾಮಾನ್ಯವಾಗಿ ಪ್ರತಿ ದಿನ 16-18 ಗಂಟೆಗಳ ಕಾಲ ಕಾರ್ಯನಿರತರಾಗಿರುತ್ತಿದ್ದ ವಿಕ್ರಮ್ ಸಾರಾಭಾಯಿಯವರು ಕಾರ್ಯನಿಮಿತ್ತ ತುಂಬಾ ರಾಕೆಟ್ ಉಡಾವಣಾಕೇಂದ್ರಕ್ಕೆ ತೆರಳಿದ ಸಂದರ್ಭದಲ್ಲಿ ರಾತ್ರಿ ನಿದ್ರಿಸುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು (1971 ಡಿಸೆಂಬರ್ 30). ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯಿ ವ್ಯೋಮಕೇಂದ್ರ ಮತ್ತು ಪುಣೆಯ ಸಮೀಪದ ಆರ್ವಿಯಲ್ಲಿರುವ ವಿಕ್ರಮ್ ಭೂಠಾಣ್ಯ - ಇವು ಈ ಸ್ವದೇಶಪ್ರೇಮೀ ಭಾರತೀಯ ವಿಜ್ಞಾನಿಗೆ ರಾಷ್ಟ್ರ ಸಲ್ಲಿಸಿದ ಕೃತಜ್ಞತೆಯ ಪ್ರತೀಕಗಳು.

	              		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
							 (ಎ.ಕೆ.ಬಿ.)